ಗೋವಿಂದ ಪಿಳ್ಳೆ, ಪಿ-
1849-1897. ಮಲಯಾಳ ಭಾಷಾ ಚರಿತ್ರಂ ಎನ್ನುವ ಗ್ರಂಥದ ಕರ್ತೃ. ತೀರುವನಂತಪುರದ ಶ್ರೀಕಂಠೇಶ್ವರ ಪ್ರದೇಶದ ಪಪ್ಪುಪಿಳ್ಳೆ ಈತನ ತಂದೆ. 1873ರಲ್ಲಿ ಬಿ. ಎ ಪದವಿ ಪಡೆದು ತೀರುವನಂತಪುರದ ಒಂದು ಪ್ರೌಢಶಾಲೆಗೆ ಮುಖ್ಯೋಪಧ್ಯಾಯನಾಗಿ ನೇಮಕಗೊಂಡ. ಒಂದು ವರ್ಷ ಕಳೆಯುವಷ್ಟರಲ್ಲಿ ಆಗಿನ ತೀರುವಾಂಕುರು ಮಹಾರಾಜರಾಗಿದ್ದ ಆಯಿಲ್ಯ ತಿರುನಾಳರು ಈತನನ್ನು ತಮ್ಮ ಅರಮನೆಯ ಪ್ರಧಾನ ಕರಣಿಕನನ್ನಾಗಿ ನೇಮಿಸಿಕೊಂಡರು. ಹೀಗೆ ಅರಮನೆಯ ಪ್ರಧಾನಾಧಿಕಾರಿ ಆಗಿ ಪಿಳ್ಳೆ ಸ್ವಲ್ಪಕಾಲ ರಾಜರ ವಿಶೇಷ ಪ್ರೀತಿಗೆ ಪಾತ್ರನಾಗಿ ಸರ್ವಾಧಿಕಾರ್ಯಕ್ಕಾರ್ ಎಂದು ಸಾಕ್ಕಷ್ಟು ಪ್ರಸಿದ್ಧನಾದ. 

	ಆಯಿಲ್ಯ ತೀರುನಾಳ್ ಮಹಾರಾಜರು ದಿವಂಗತರಾದ (1880) ಬಳಿಕ ರಾಜ ಗದ್ದುಗೆಯನ್ನೆರಿದ ವಿಶಾಖ ತಿರುನಾಳ್ ಅದುವರೆಗೆ ರಾಜಾಶ್ರೀತರಾಗಿದ್ದ ಅಧಿಕಾರಿಗಳನ್ನೆಲ್ಲ ಕೆಲಸದಿಂದ ತೆಗೆದು ಹಾಕಿದರು. ಆ ಸಮೂಹದಲ್ಲಿ ಗೋವಿಂದ ಪಿಳ್ಳೆಯೂ ಒಬ್ಬ. ಆ ಘಟನೆಯ ಅನಂತರ ಪಿಳ್ಳೆ ಆಸಕ್ತಿ ಮಲಯಾಳಂ ಸಾಹಿತ್ಯ ರಚನೆಯ ಕಡೆಗೆ ತಿರುಗಿತು. ವಿದ್ಯಾರ್ಥಿಯಾಗಿದಾಗಿನಿಂದಲೂ ಮಲಯಾಳಂ ಭಾಷೆ ಮತ್ತು ಸಾಹಿತ್ಯಕ್ಕೆ ಒಂದು ಸಮಗ್ರ ಚರಿತ್ರೆಯನ್ನು ರಚಿಸಬೇಕೆಂದು ಯೋಚಿಸುತ್ತಿದ್ದ ಪಿಳ್ಳೆ ಆ ಯೋಜನೆಯ ಅಂಗವಾಗಿ 1881ರಲ್ಲಿ ಮಲಯಾಳ ಭಾಷಾ ಚರಿತ್ರಂ ಎನ್ನುವ ನೂರಾಅರವತ್ತೆಂಟು ಪುಟಗಳ ಮೊದಲ ಸಂಪುಟವನ್ನು ಸಿದ್ಧ ಮಾಡಿ ಪ್ರಕಟಿಸಿದ. 1889 - 90 ರ ಅವಧಿಯಲ್ಲಿ ಐನೂರು ಪುಟಗಳ ಮತ್ತೆರಡು ಸಂಪುಟಗಳು ಬೆಳಕು ಕಂಡವು. ಮಾಸಿಕಗಳು, ಸಾಪ್ತಾಹಿಕಗಳು, ಮುದ್ರಣಾಲಯಗಳು - ಮುಂತಾದವುಗಳ ಸೌಲಭ್ಯಗಳಿಲ್ಲದಿದ್ದ ಕಾಲದಲ್ಲಿ, ಮಲಯಾಳದ ಪ್ರಸಿದ್ಧ ಗ್ರಂಥಗಳು ಪ್ರಕಟಗೊಂಡಿರದಿದ್ದ ಕಾಲದಲ್ಲಿ ಓಲೆಯ ಗ್ರಂಥಗಳು ಐತಿಹ್ಯಗಳು - ಮುಂತಾದವನ್ನು ಕಾಪಾಡಿಕೊಂಡು ಬಂದಿದ್ದ ಪ್ರಾಚೀನ ಗ್ರಹಗಳಿಗೆ ಅಲೆದು, ಹುಡುಕಿ, ಸಂಗ್ರಹಿಸಿ ಸಾಹಿತ್ಯ ಚರಿತ್ರೆಯೊಂದನ್ನು ಮೊದಲ ಬಾರಿಗೆ ರಚಿಸಿದ ಕೀರ್ತಿ ಗೋವಿಂದ ಪಿಳ್ಳೆಯದು.

	ಅರಮನೆಯ ಅಧಿಕಾರವನ್ನು ಬಿಟ್ಟ ಮೇಲೆ ಪಿಳ್ಳೆ ತಿರುವನಂತಪುರದಲ್ಲಿ ವಕೀಲನಾದ. ಅದೇ ಸಂದರ್ಭದಲ್ಲಿ ಒಂದು ಇಂಗ್ಲೀಷ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದಲ್ಲದೇ ಅದುವರೆಗೆ ಬೆಳಕು ಕಾಣದೆ ಇದ್ದ ಭಾಷಾ ನೈಷದ ಚಂಪೂ, ದಕ್ಷಯಾಗ ಕಿಳಿಪ್ಪಾಟ್ಟು - ಮುಂತಾದವನ್ನು ಪ್ರಕಟಿಸಿ ಬೆಳಕಿಗೆ ತಂದ. ರೋಮನ್ ಚರಿತ್ರೆ ಮತ್ತು ಎ ಹ್ಯಾಂಡ್ ಬುಕ್ ಆಫ್ ಟ್ರ್ಯಾವಂಕೂರ್ ಎನ್ನುವ ಎರಡು ಸ್ವಂತ ಕೃತಿಗಳನ್ನು ರಚಿಸಿ ಪ್ರಕಟಿಸಿದ. 

	ಒಂದು ಇಂಗ್ಲೀಷ್ ಮಲಯಾಳಂ ನಿಘಂಟನ್ನು ಸಿದ್ಧಪಡಿಸಿ ಪ್ರಕಟಿಸುವ ಯೋಜನೆ ಹಾಕಿಕೊಂಡು ಪಿಳ್ಳೆ ಅದಕ್ಕಾಗಿ ಶ್ರಮಿಸಿದುಂಟು. ಆದರೆ ಅದು ಆತನ ಜೀವಮಾನದಲ್ಲಿ ಸಿದ್ಧಿಸಲಿಲ್ಲ.						(ಬಿ.ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ